ಕ್ರೊಪಾಟ್ಕಿನ್, ಪೀಟರ್, ಅಲೆಕ್ಸೀವಿಚ್	
1842-1921. ರಷ್ಯದ ಭೂಗೋಳಶಾಸ್ತ್ರಜ್ಞ, ಕ್ರಾಂತಿಕಾರಿ; ಅಲೌಕಿಕವೂ ಸಾತ್ತ್ವಿಕವೂ ಆದ ಗುಣದಿಂದ ಕಷ್ಟಗಳನ್ನು ನಗುನಗುತ್ತ ಸಹಿಸಿ, ಕ್ರಾಂತಿ ಚಳವಳಿಗೆ ಜನತೆಯ ಗೌರವ ದೊರಕಿಸಿಕೊಟ್ಟ ವ್ಯಕ್ತಿ. ಚಕ್ರವರ್ತಿ 2ನೆಯ ಅಲೆಕ್ಸಾಂಡರನ ಪರಿವಾರದಲ್ಲಿ ಸೇವೆ ಮಾಡಿ, ಅರಮನೆಯ ಜೀವನದಿಂದ ಬೇಸರ ಹೊಂದಿ ಪ್ರಾಂತೀಯ ಸೇನೆಯಲ್ಲಿ ಅಶ್ವದಳವೊಂದರ ನಾಯಕನಾಗಿ ಸೇರಿದ. ಈತ ಸೈಬೀರಿಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಭೂವಿಜ್ಞಾನದಲ್ಲಿ ಆಸಕ್ತಿ ವಹಿಸಿ ಅಲ್ಲಿ ಶೋಧನೆಗಳಲ್ಲಿ ನಿರತನಾದ.

	1872ರಲ್ಲಿ ಸ್ವಿಟ್‍ಜûರ್ಲೆಂಡಿಗೆ ಹೋಗಿದ್ದಾಗ ಅಲ್ಲಿ ಸುಪ್ರಸಿದ್ಧ ಕ್ರಾಂತಿಕಾರಿ ಎಂ.ಎ. ಬಕುನಿನ್ನನ ಸಂದರ್ಶನ ಇವನಿಗೆ ಲಭ್ಯವಾಯಿತು. ಈತ ಬಕುನಿನ್ನನ ಆಕರ್ಷಣೆಗೆ ಒಳಗಾಗಿ ರಷ್ಯಕ್ಕೆ ಹಿಂದಿರುಗಿದ ತರುವಾಯ ಕ್ರಾಂತಿತತ್ತ್ವಗಳನ್ನು ಜನರಲ್ಲಿ ಬೋಧಿಸಲಾರಂಭಿಸಿದ. ಅದರ ಫಲವಾಗಿ 1874ರಲ್ಲಿ ಬಂಧನಕ್ಕೆ ಗುರಿಯಾದ. 1876ರಲ್ಲಿ ಸೆರೆಯಿಂದ ತಪ್ಪಿಸಿಕೊಂಡು ಇಂಗ್ಲೆಂಡಿಗೂ ತರುವಾಯ ಸ್ವಿಟ್‍ಜûರ್ಲೆಂಡಿಗೂ ಹೋದ. ಮತ್ತೆ 1882ರಲ್ಲಿ ಈತ ಫ್ರಾನ್ಸಿನಲ್ಲಿ ಬಂಧನಕ್ಕೆ ಒಳಗಾದ. 1886ರಲ್ಲಿ ಬಿಡುಗಡೆಯಾದ ಅನಂತರ ಲಂಡನ್ ಬಳಿ ನೆಲೆಸಿದ. ಮನುಷ್ಯ ಜೀವನದ ಮೇಲೆ ಯಂತ್ರಗಳ ಪ್ರಭಾವ ಬೆಳೆಯುತ್ತಿರುವುದೆಂಬುದೂ ಅದರಿಂದ ಮಾನವರ ಸ್ವಾಭಾವಿಕ ಏಳಿಗೆಗೆ ಅಡ್ಡಿಯುಂಟಾಗುತ್ತದೆಂಬುದೂ ಇವನ ನಂಬಿಕೆಯಾಗಿತ್ತು. ಆಗ ಸಂಭವಿಸಿದ ಒಂದನೆಯ ಮಹಾಯುದ್ಧವನ್ನು ಇವನು ಸ್ವಾಗತಿಸಿದ. ಆಗ ಅಸ್ತಿತ್ವದಲ್ಲಿದ್ದ ಸೈನಿಕ ಆಡಳಿತ ಇದರಿಂದ ಕೊನೆಗೊಳ್ಳುವುದೆಂಬುದು ಅವನ ನಿರೀಕ್ಷೆಯಾಗಿತ್ತು. 1917ರ ಫೆಬ್ರವರಿಯಲ್ಲಿ ನಡೆದ ರಷ್ಯನ್ ಕ್ರಾಂತಿಗೂ ಇವನ ಸ್ವಾಗತವಿತ್ತು. ಇವನ ಕ್ರಾಂತಿ ದೃಷ್ಟಿಗೆ ಈ ಘಟನೆ ಉತ್ತೇಜಕವಾಗಿತ್ತು. ಆದರೆ ಅದೇ ನವೆಂಬರಿನಲ್ಲುಂಟಾದ ಬಾಲ್‍ಷೆವಿಕ್ ಕ್ರಾಂತಿಯನ್ನು ಈತ ಖಂಡಿಸಿದ. ಕಮ್ಯುನಿಸ್ಟರು ಜನಪ್ರಿಯತೆ ಗಳಿಸಲಾರರೆಂಬುದು ಇವನ ಅಭಿಪ್ರಾಯವಾಗಿತ್ತು. ಈ ಮಧ್ಯೆ ರಷ್ಯದ ಆಂತರಿಕ ವಿಷಯಗಳಲ್ಲಿ ಕೈಹಾಕಿದ ಪಾಶ್ಚಾತ್ಯ ರಾಷ್ಟ್ರಗಳನ್ನು ಈತ ತೀವ್ರವಾಗಿ ಟೀಕಿಸಿದ. ರಷ್ಯ ಆಂತರಿಕವಾಗಿ ನೆಮ್ಮದಿ ಸಾಧಿಸಿಕೊಳ್ಳುವ ಮುನ್ನವೆ, 1921ರ ಫೆಬ್ರುವರಿ 8 ರಂದು, ಈತ ಮಾಸ್ಕೋ ಬಳಿ ಮೃತನಾದ. ತನ್ನ ಸೌಮ್ಯ ಮತ್ತು ಸಾಧು ಸ್ವಭಾವದಿಂದ ಜನತೆಯಲ್ಲಿ ಕ್ರಾಂತಿಕಾರರ ಬಗ್ಗೆ ಅನುಕಂಪವನ್ನುಂಟುಮಾಡಿದ ವಿಶಿಷ್ಟ ವ್ಯಕ್ತಿ ಕ್ರೊಪಾಟ್ಕಿನ್. 			 				 (ಕೆ.ಎಸ್.ಆರ್.ಎ.; ವಿ.ಆರ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ